ಬೆಲ್ಜಿಯಮ್
ಪಶ್ಚಿಮ ಯೂರೊಪಿನಲ್ಲಿರುವ ಒಂದು ದೇಶ. ಉತ್ತರ ಮತ್ತು ಈಶಾನ್ಯದಲ್ಲಿ ನೆದರ್ಲೆಂಡ್ಸ್, ಪೂರ್ವದಲ್ಲಿ ಪಶ್ಚಿಮ ಜರ್ಮನಿ ಮತ್ತು ಲಕ್ಸೆಂಬರ್ಗ್, ದಕ್ಷಿಣದಲ್ಲಿ ಫ್ರಾನ್ಸ್, ಪಶ್ಚಿಮದಲ್ಲಿ ಉತ್ತರ ಸಮುದ್ರ ಇದರ ಮೇರೆಗಳು, ಯೂರೋಪಿನ ಅತಿ ಚಿಕ್ಕ ರಾಜ್ಯಗಳಲ್ಲೊಂದಾದ ಬೆಲ್ಜಿಯಮ್ಮಿನ ವಿಸ್ತೀರ್ಣ 30,513 ಚ.ಕಿಮೀ. ಜನಸಂಖ್ಯೆ 9,800,000 (1981). ರಾಜಧಾನಿ ಬ್ರಸೆಲ್ಸ್.

	ಭೌತಲಕ್ಷಣ: ಬೆಲ್ಜಿಯಮ್ಮಿನ ಸುಮಾರು ಮೂರನೆಯ ಎರಡು ಭಾಗ ಸಮುದ್ರ ಮಟ್ಟಕ್ಕೆ ಸಮವಾಗಿವೆ. ನೆದರ್ಲೆಂಡಿನಂತೆ ಬೆಲ್ಜಿಯಮ್ಮಿನ ಯಾವ ಭಾಗವೂ ಸಮುದ್ರ ಮಟ್ಟಕ್ಕಿಂತ ಕೆಳಗೆ ಇಲ್ಲವಾದರೂ ಕಡಲು ನೆಲವನ್ನು ಕೊರೆಯದಂತೆ ಕರಾವಳಿಯ ಉದ್ದಕ್ಕೂ ಯುಕ್ತ ಎಚ್ಚರಿಕೆ ವಹಿಸಿದೆ. ಬೆಲ್ಜಿಯಮ್ಮಿನ ಉತ್ತರ ಭಾಗ ಮತ್ತು ಕರಾವಳಿ ಮೈದಾನ ಪ್ರದೇಶಗಳು. ಉತ್ತರ ಭಾಗದದಲ್ಲಿರುವ ಫ್ಲಾಂಡರ್ಸ್‍ನಲ್ಲಿ ಬಲುತಗ್ಗಾದ ಬೆಟ್ಟಗಳಿವೆ. ಆಗ್ನೇಯ ಬೆಲ್ಜಿಯಮ್ಮಿನಲ್ಲಿರುವ ಆರ್ಡೆನ್ ಗಿರಿ ಶ್ರೇಣಿಗಳು ನೆರೆಯ ಲಕ್ಸ್‍ಂಬರ್ಗ್ ಮತ್ತು ಫ್ರಾನ್ಸಿಗೂ ಹಬ್ಬಿವೆ. ಜರ್ಮನಿಯ ಗಡಿಯ ಬಳಿ ಇವು 694 ಮೀ ಎತ್ತರಕ್ಕೆ ಏರುತ್ತವೆ. ಲೀಸ್, ಸ್ಕೆಲ್ಟ್, ಮ್ಯೂಸ್ ಮತ್ತು ಸಾಂಬ್ರ್ ಇವು ಇಲ್ಲಿಯ ಮುಖ್ಯ ನದಿಗಳು. 

	ವಾಯುಗುಣ: ಬೆಲ್ಜಿಯಮ್ಮಿನದು ಸಮಶೀತೋಷ್ಣ ವಾಯುಗುಣ, ನೆರೆಯ ಸಮುದ್ರದಿಂದ ಇದು ಪ್ರಭಾವಿತವಾಗಿದೆ. ಅಟ್ಲಾಂಟಿಕದಿಂದ ಬೀಸುವ ಗಾಳಿಯಿಂದ ಇಲ್ಲಿಯ ಹವಾಗುಣ ಆಗಾಗ ವ್ಯತ್ಯಾಸವಾಗುತ್ತಿದ್ದು ಪದೇ ಪದೇ ಮಳೆ ಬೀಳುತ್ತಿರುತ್ತದೆ. ವಾರ್ಷಿಕ ಮಳೆ 750-1000 ಮಿಮೀ. ವಾರ್ಷಿಕ ಮಾಧ್ಯ ಉಷ್ಣತೆ 100 ಸೆ. ಸಮುದ್ರದಿಂದ ಇರುವ ದೂರ ಹಾಗೂ ಪ್ರದೇಶದ ಎತ್ತರಕ್ಕೆ ಅನುಗುಣವಾಗಿ ಇಲ್ಲಿಯ ವಾಯುಗುಣ ಬದಲಾಗುತ್ತಿರುತ್ತದೆ. 

	ಸಸ್ಯಪ್ರಾಣಿ ಜೀವನ: ಬೆಲ್ಜಿಯಮ್ ಪರ್ಣಪಾತಿ ಅರಣ್ಯ ಪ್ರದೇಶದಲ್ಲಿದೆ. ಪ್ರಮುಖ ಮರ ಓಕ್. ಇತರ ಮರಗಳು ಬೀಚ್, ಬರ್ಜ್ ಮತ್ತು ಎಲ್ಮೆ. ಕಳೆದ ಒಂದು ಶತಮಾನದಿಂದ ಶಂಕುಪರ್ಣ ಮರಗಳನ್ನು ನೆಡುತ್ತಿರುವುದರಿಂದ ಅರಣ್ಯಗಳ ಸ್ವರೂಪ ಬದಲಾಗಿದೆ. ನೈಸರ್ಗಿಕ ಪ್ರಾಣಿಗಳು ಮಾನವನ ಮಿತಿಮೀರಿದ ಬೇಟೆಯಿಂದಾಗಿ ಕಡಿಮೆಯಾಗಿವೆ. ಯೂರೇಷಿಯನ್ ಪ್ರಾಣಿಗಳು ಇಲ್ಲಿವೆ. ಕಾಡು ಹಂದಿ, ಕಾಡುಬೆಕ್ಕು ಮತ್ತು ಜಿಂಕೆಗಳು ಅರ್ಡೆನ್ಸಿನ ಕಾಡುಗಳಲ್ಲಿ ಅಲೆದಾಡುತ್ತವೆ. 

	ಕೃಷಿ: ಬೆಲ್ಜಿಯಮ್ ಕೃಷಿ ಕೈಗಾರಿಕೆಗಳೆರಡರಲ್ಲೂ ಮುಂದುವರಿದಿದೆ. ಇಲ್ಲಿ ಬೆಳೆಯುವ ಮುಖ್ಯವಾದ ಧಾನ್ಯಗಳು ಓಟ್ಸ್, ರೈ, ಗೋಧಿ ಮತ್ತು ಬಾರ್ಲಿ, ಆಲೂಗೆಡ್ಡೆ, ಸಕ್ಕರೆಬೀಟ್ ಇನ್ನೆರಡು ಮುಖ್ಯ ಕೃಷಿ ಉತ್ಪನ್ನಗಳು. ದೊಡ್ಡ ಪಟ್ಟಣಗಳ ಸುತ್ತಮುತ್ತ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಬೆಳೆಸುತ್ತಾರೆ. ಇವು ಇಂಗ್ಲೆಂಡಿಗೂ ರಫ್ತಾಗುತ್ತವೆ. ಹೈನುಗಾರಿಕೆ ಇನ್ನೊಂದು ಮುಖ್ಯ ಉದ್ಯಮ. 

	ಬೆಲ್ಜಿಯಮ್ಮಿನ ಶೇಕಡಾ 60ರಷ್ಟು ನೆಲ ಬೇಸಾಯಕ್ಕೆ ಒಳಪಟ್ಟಿದೆ. ಮಧ್ಯ ಬೆಲ್ಜಿಯಮ್ ವಿಶೇಷವಾಗಿ ಬೇಸಾಯದಲ್ಲಿ ಮುಂದುವರಿದಿದೆ. ಬೆಲ್ಜಿಯಮ್ ವೈಜ್ಞಾನಿಕ ಹಾಗೂ ಸಾಂದ್ರ ವ್ಯವಸಾಯ ವಿಧಾನಗಳನ್ನು ಅನುಸರಿಸುತ್ತಿದೆ. ಆದಾಗ್ಯೂ ಇಲ್ಲಿಯ ಬೇಡಿಕೆಯನ್ನು ಪೂರೈಸುವಷ್ಟು ಉತ್ಪಾದನೆಯಾಗುತ್ತಿಲ್ಲ. ಹಾಲೆಂಡಿನಿಂದ ಇದು ಬೆಣ್ಣೆ, ಚೀಸ್ ಮತ್ತು ಇತರ ಕೆಲವು ಕೃಷಿ ವಸ್ತುಗಳನ್ನು ಆಮದುಮಾಡಿಕೊಳ್ಳುತ್ತಿದೆ. ಕಡಲಕೆರೆಯಲ್ಲಿ ಮೀನುಗಾರಿಕೆ ಒಂದು ಮುಖ್ಯ ಕಸುಬು. 

	ಕೈಗಾರಿಕೆ: ಬೆಲ್ಜಿಯಮ್ ಕೈಗಾರಿಕೆಯಲ್ಲೂ ಮುಂದುವರಿದಿದೆ. ಇಲ್ಲಿಯ ಕಲ್ಲಿದ್ದಲು, ಕಬ್ಬಿಣ ಅದುರು ಮತ್ತು ತವರ ನಿಕ್ಷೇಪಗಳು ಕೈಗಾರಿಕೆಗೆ ಸಹಾಯಕ. ಕಲ್ಲಿದ್ದಲು ಗಣಿಗಳು ಮುಖ್ಯವಾದವು. ವಾಯವ್ಯ ಬೆಲ್ಜಿಯಮ್ಮಿನಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣ ಅದುರುಗಳು ಪಕ್ಕಪಕ್ಕದಲ್ಲೇ ಸಿಗುತ್ತವೆ. ಹೇನಾಟ್, ಲಿಯಾಷ್ ಮತ್ತು ಲಿಂಬರ್ಗ್ ಪ್ರಾಂತ್ಯಗಳಲ್ಲಿ ಕಲ್ಲಿದ್ದಲು ಗಣಿಗಳಿವೆ. ಲಿಯಾಷ್, ಸೆರಾನ್, ಹಸ್ರ್ಟ್‍ಲ್ ಮತ್ತು ಆಂಗ್ಲರ್‍ನಲ್ಲಿ ದೊಡ್ಡ ಉಕ್ಕು ಕಾರ್ಖಾನೆಗಳೂ ಇತರ ಲೋಹ ಕೈಗಾರಿಕೆಗಳೂ ಇವೆ. ಗೆಂಟ್, ಕಟ್ರ್ರಾ ಮತ್ತು ರೀನೇಕ್ಸ್ ಮಧ್ಯಯುಗದ ಕಾಲದಿಂದಲೂ ಲಿನನ್ ಬಟ್ಟೆಯ ತಯಾರಿಕೆಗೆ ಪ್ರಸಿದ್ಧವಾಗಿವೆ. ಹೇನಾಟ್ ಪ್ರಾಂತ್ಯದ ಟುರ್ನೇ ಮತ್ತು ಇತರ ಪಟ್ಟಣಗಳಲ್ಲಿ ಒಳ್ಳೆಯ ಜಮಖಾನೆಗಳು ತಯಾರಾಗುತ್ತವೆ. ವವ್ರ್ಯೇ ಉಣ್ಣೆ ಬಟ್ಟೆ ತಯಾರಿಕೆಯ ಕೇಂದ್ರ. ಬ್ರಸೆಲ್ಸ್‍ನಲ್ಲಿ ಉಡುಪು ಮತ್ತು ಕೈಚೀಲಗಳನ್ನು ತಯಾರಿಸುತ್ತಾರೆ. ಬೆಲ್ಜಿಯಮ್ಮಿನಲ್ಲಿ ಬೆಳೆಯುವ ಬೀಟಿನಿಂದ ಸಕ್ಕರೆ ತಯಾರಿಸುವ ಕಾರ್ಖಾನೆಗಳು ಅಲ್ಲಲ್ಲಿವೆ. ಮಾನ್ಸ್, ಷಾರ್ಲ್‍ರಾಯ್, ಸಾಮುರ್ ಮತ್ತು ವವ್ರ್ಯೇ ಮುಖ್ಯ ಕೈಗಾರಿಕಾ ಕೇಂದ್ರಗಳು. ಯಂತ್ರ ಮತ್ತು ವಿದ್ಯುತ್ ಸಲಕರಣೆಗಳೂ ಸೇರಿದಂತೆ ಬೆಲ್ಜಿಯಮ್ಮಿನಲ್ಲಿ ಅನೇಕ ಲೋಹ ಸರಕುಗಳು ತಯಾರಾಗುತ್ತವೆ. ದೇಶದ ರಫ್ತಿನಲ್ಲಿ ಶೇಕಡಾ 18 ರಷ್ಟು ಇಂಥ ಸರಕುಗಳು, ಎರಕ ಉಕ್ಕು, ಹಾಳೆ, ಕಬ್ಬಿಣ, ರೈಲ್ವೆ ಉಪಕರಣ, ಹಡಗು, ಮೋಟಾರುವಾಹನ, ಯಂತ್ರಸಲಕರಣೆಗಳ ತಯಾರಿಕೆ ಮುಖ್ಯವಾದುವು. ರಾಸಾಯನಿಕ, ಗಾಜು, ಕುಂಭ, ರಬ್ಬರ್ ಮತ್ತು ಕಾಗದ ಇತರ ತಯಾರಿಕೆಗಳು. 

	ವ್ಯಾಪಾರ: ಫ್ರಾನ್ಸ್, ಪಶ್ಚಿಮ ಜರ್ಮನಿ, ಬ್ರಿಟನ್ ಮತ್ತು ನೆದರ್ಲೆಂಡ್ಸ್ ದೇಶಗಳೊಡನೆ ಇದರ ವ್ಯಾಪಾರ ಬೆಳೆದಿದೆ. ಆಹಾರ ಪದಾರ್ಥ, ಕಬ್ಬಿಣ, ಅದುರು, ಖನಿಜ ತೈಲ, ರಾಸಾಯನಿಕ, ಉಣ್ಣೆ, ಹತ್ತಿ, ಕಬ್ಬಿಣೇತರ ಲೋಹಗಳು, ಯಂತ್ರ ಮತ್ತು ರಬ್ಬರ್ ಸರಕುಗಳು ಬೆಲ್ಜಿಯಮ್ಮಿನ ಮುಖ್ಯ ಆಮದುಗಳು. ಬೆಲ್ಜಿಯಮ್ಮಿನ ಆಮದುಗಳಲ್ಲಿ 30 ನೆದರ್ಲೆಂಡ್ಸಿನಿಂದಲೂ ಶೇಕಡ 18 ಪಶ್ಚಿಮ ಜರ್ಮನಿಯಿಂದಲೂ ಶೇಕಡ 15 ಫ್ರಾನ್ಸಿನಿಂದಲೂ ಶೇಕಡ 8 ರಿಂದ 10 ಅಮೆರಿಕಾದಿಂದಲೂ ಬರುತ್ತವೆ. ಬೆಲ್ಜಿಯಮ್ ರಫ್ತುಮಾಡುವ ಮುಖ್ಯ ಸರಕುಗಳು ಕಬ್ಬಿಣ, ಉಕ್ಕು ವಸ್ತುಗಳು, ಕಲ್ಲಿದ್ದಲು ಮತ್ತು ಕಿಟ್ಟ, ರಾಸಾಯನಿಕ, ಗೊಬ್ಬರ ಮತ್ತು ಜವಳಿ. ಬೆಲ್ಜಿಯಮ್ಮಿನ ರಫ್ತಿನಲ್ಲಿ ಶೇಕಡ 40 ರಷ್ಟು ಕೈಗಾರಿಕೋತ್ಪನ್ನಗಳು. 

	ಸಾರಿಗೆ: ಯೂರೋಪಿನ ಪಶ್ಚಿಮ ಭಾಗದಲ್ಲಿ ಅಟ್ಲಾಂಟಿಕ್ ಸಾಗರದ ಮುಖದಬಳಿ ಇರುವ ಬೆಲ್ಜಿಯಮ್ಮಿನ ಸಾರಿಗೆ ವ್ಯವಸ್ಥೆ ಬಹಳ ಸಮರ್ಪಕ. ಭೂಜಲ ವಾಯು ಮಾರ್ಗಗಳು ಚೆನ್ನಾಗಿ ವಿಕಾಸಹೊಂದಿವೆ. ಬ್ರಸೆಲ್ಸ್ ರೈಲ್ವೆ ಕೇಂದ್ರ. ಬೆಲ್ಜಿಯಮ್ಮಿನ ನದಿಗಳು ನೌಕಾಯೋಗ್ಯವಾದುವು. ಅವನ್ನು ಕಾಲುವೆಗಳಿಂದ ಪರಸ್ಪರ ಕೂಡಿಸಲಾಗಿದೆ. ಬೆಲ್ಜಿಯಮ್ ವಿಮಾನ ಸಂಸ್ಥೆ ಯುರೋಪಿನ ಎಲ್ಲ ಪ್ರಮುಖ ನಗರಗಳೊಂದಿಗೂ ಸಂಪರ್ಕ ಕಲ್ಪಿಸಿವೆ. 

	ಸ್ಕೆಲ್ಟ್ ನದಿ ಮುಖಜ ಭೂಮಿಯಲ್ಲಿರುವ ಆಂಟ್‍ವರ್ಪ್ ಬೆಲ್ಜಿಯಮ್ಮಿನ ಅತ್ಯಂತ ಪ್ರಮುಖ ಬಂದರು. ಇತರ ದೇಶಗಳಿಂದ ಸರಕುಗಳನ್ನು ತರಿಸಿ ಮತ್ತೆ ಆಮದು ಮಾಡುವ ವ್ಯಾಪಾರ ಇಲ್ಲಿ ನಡೆಯುತ್ತದೆ. ಈ ವಿಚಾರದಲ್ಲಿ ಇದು ಹ್ಯಾಮ್‍ಬರ್ಗ್, ರಾಟರ್‍ಡ್ಯಾಮ್‍ಗಳೊಡನೆ ಸ್ಪರ್ಧಿಸುತ್ತದೆ. ಬೆಲ್ಜಿಯಮ್ ಮಾತ್ರವೇ ಅಲ್ಲದೆ ಪೂರ್ವ ಫ್ರಾನ್ಸಿನ ಭಾಗಗಳೂ ರೂರ್ ಮತ್ತು ರೈನ್ ಕಣಿವೆಗಳೂ ಇದರ ಹಿನ್ನಾಡಿನಲ್ಲಿ ಸೇರಿವೆ. ಆಂಟ್‍ವರ್ಪ್ ದೊಡ್ಡ ಕೈಗಾರಿಕಾ ಕೇಂದ್ರ. ವಜ್ರ ಕೈಗಾರಿಕೆಗೆ ಬಲು ಪ್ರಸಿದ್ಧವಾಗಿದೆ. 

	ಬೆಲ್ಜಿಯಮ್ಮಿನ ಕಲ್ಲಿದ್ದಲು ಗಣಿ ಪ್ರದೇಶದ ಹೃದಯಸ್ಥಾನದಲ್ಲಿರುವ ಲಿಯಾಷ್ ಒಂದು ಪ್ರಮುಖನಗರ. ರಾಸಾಯನಿಕಗಳು, ಗಾಜು, ಲೋಹ ಕೆಲಸ ಇವು ಇಲ್ಲಿಯ ಮುಖ್ಯ ಕೈಗಾರಿಕೆಗಳು. ಗೆಂಟ್‍ಲಿನನ್ ತಯಾರಿಕಾಕೇಂದ್ರ ಉಣ್ಣೆ ಕೈಗಾರಿಕಾ ಕೇಂದ್ರವಾದ ವವ್ರ್ಯೇ ದಕ್ಷಿಣದ ಬೆಟ್ಟನಾಡಿನಲ್ಲಿದೆ. ಬ್ರಸೆಲ್ಸ್ ಬೆಲ್ಜಿಯಮ್ಮಿನ ರಾಜಧಾನಿ. ಯೂರೋಪಿನ ಅತ್ಯಂತ ಸುಂದರ ಹಾಗೂ ಆಕರ್ಷಕ ನಗರಗಳಲ್ಲೊಂದೆಂದು ಪ್ರಸಿದ್ಧವಾಗಿದೆ. ಅದು ಕಲೆ ಕೈಗಾರಿಕೆ ವಾಣಿಜ್ಯಗಳ ಕೇಂದ್ರ. ಅನೇಕ ಹೊಸ ಕಟ್ಟಡಗಳಿಂದ ಕೂಡಿದ ಈ ನಗರವನ್ನು ಬಲು ಅಚ್ಚುಕಟ್ಟಾಗಿ ಇಡಲಾಗಿದೆ. ಬೆಲ್ಜಿಯಮ್ಮಿನ ಮಧ್ಯದಲ್ಲಿ ಉತ್ತರ ಸಮುದ್ರದಿಂದ ಸುಮಾರು 90 ಕಿಮೀ ದೂರದಲ್ಲಿರುವ ಬ್ರಸೆಲ್ಸ್ ಚಿಕ್ಕ ಪ್ಯಾರೀಸ್ ಎಂದೇ ಹೆಸರಾಗಿದೆ. ಇದೆ ಜನಸಂಖ್ಯೆ 1008,715 (1980). ಮ್ಯಾಲೀನ್, ಡರ್ನ್, ಅಸ್ಟಾಂಡ್ ಮತ್ತು ಬ್ರೂಷ್ ಬೆಲ್ಜಿಯಮ್ಮಿನ ಇತರ ನಗರಗಳು. 

	ಜನಜೀವನ: ಬೆಲ್ಜಿಯಮ್ ಪ್ರಪಂಚದ ಅತ್ಯಂತ ಜನಸಾಂದ್ರತೆ ದೇಶಗಳಲ್ಲೊಂದು ಇಲ್ಲಿ ಸರಾಸರಿ ಪ್ರತಿ ಚಕಿಮೀಗೆ ಸುಮಾರು 320 ಜನ ವಾಸಿಸುತ್ತಾರೆ. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ. ಬಹು ಸಂಖ್ಯಾತರು ರೋಮನ್ ಕ್ಯಾಥೋಲಿಕರು. ದೇಶದಲ್ಲಿ ಪ್ರಮುಖವಾಗಿ ಎರಡು ಭಾಷೆ ಆಡುವ ಜನರಿದ್ದಾರೆ. ಉತ್ತರ ಭಾಗದ ಜನರು ಫ್ಲೆಮಿಂಗರು. ಇವರ ಭಾಷೆ ಫ್ಲೆಮಿಷ್. ಲಿಖಿತ ಫ್ಲೆಮಿಷ್ ಭಾಷೆ ಡಚ್ ಭಾಷೆಯನ್ನು ಹೋಲುತ್ತದೆ. ಉಚ್ಚಾರಣೆಯಲ್ಲಿ ಅದರಿಂದ ಭಿನ್ನವಾಗಿದೆ. ದಕ್ಷಿಣ ಭಾಗದ ಜನರು ವ್ಯಾಲೂನ್‍ಗಳೂ ಇದು ಫ್ರೆಂಚ್‍ನ ಉಪಭಾಷೆ. ಇವೆರಡೂ ಭಾಷೆಯಾಡುವ ಜನರಿರುವ ಪ್ರದೇಶಗಳ ನಡುವೆ ಹಿಂದೆ ದಟ್ಟ ಕಾಡಿತ್ತು. ಈಗ ಕಾಡು ಅದೃಶ್ಯವಾಗಿದೆ. ಆದರೆ ಇವೆರಡೂ ಭಾಷಾ ಪ್ರದೇಶಗಳ ನಡುವಣ ಗೆರೆ ಉಳಿದಿದೆ. ಫ್ಲೆಮಿಷ್ ಭಾಷೆಯಲ್ಲಿ ಬೆಲ್ಜಿಯಮ್ ಬೆಲ್‍ಹೀ ಎಂದೂ ಫ್ರೆಂಚ್‍ನಲ್ಲಿ ಬೆಲ್‍ಷೀಕ್ ಎಂದೂ ಆಗುತ್ತದೆ. ಫ್ರೆಂಚ್ ಬಹುಕಾಲದಿಂದ ಪ್ರತಿಷ್ಠಿತರ ಹಾಗೂ ಅಧಿಕಾರದಲ್ಲರುವವರ ಭಾಷೆಯಾಗಿದೆ. ನೆದರ್ಲೆಂಡ್ಸಿನ ದೊರೆ ವಿಲಿಯಮ್ಮನ ವಿರುದ್ಧ ಬೆಲ್ಜಿಯಮ್ಮಿನ ಜನರ ಬಂಡಾಯದ ಮುಂಚೂಣಿಯಲ್ಲಿದ್ದವರು ಫ್ರೆಂಚ್ ಭಾಷೆ ಆಡುವ ಜನ. ಫ್ರೆಂಚ್ ಹಾಗೂ ಫ್ಲೆಮಿಷರ ನಡುವೆ ವಿರಸವನ್ನು ಜರ್ಮನರು ಒಂದನೆಯ ಮಹಾಯುದ್ಧದ ಕಾಲದಲ್ಲಿ ಕೆರಳಿಸಿದ್ದರು. ಆಗ ಸೇನೆಯಲ್ಲಿದ್ದ ಕಾಲಾಳುಗಳಿಗೆ ಫ್ಲೆಮಿಷ್ ಭಾಷೆ ಮಾತ್ರ ಬರುತ್ತಿತ್ತು. ಸೇನಾ ಅಧಿಕಾರಿಗಳಿಗೆ ಫ್ರೆಂಚ್ ಬಿಟ್ಟು ಬೇರೇನೂ ಬರುತ್ತಿರಲಿಲ್ಲ. ಸೇನೆಯಲ್ಲಿ ಬಂಡಾಯವೇ ಆದಿತೆಂಬ ಭಯವಿತ್ತು. ಯುದ್ಧ ಮುಗಿದ ಮೇಲೆ ಬದಲಾವಣೆಗಳಾದುವು. ಫ್ಲೆಮಿಷ್ ಭಾಷೆ ಆಡುವ ಜನರಿರುವ ಪ್ರದೇಶದಲ್ಲಿ ಪ್ರತಿಯೊಂದು ಸಾರ್ವಜನಿಕ ಪ್ರಕಟಣೆಯನ್ನೂ ಫ್ಲೆಮಿಷ್ ಹಾಗೂ ಫ್ರೆಂಚ್ ಈ ಎರಡೂ ಭಾಷೆಗಳಲ್ಲಿ ನೀಡಲಾಗುತ್ತಿತ್ತು. ವಿಶ್ವವಿದ್ಯಾಲಯದ ಹಂತದವರೆಗೆ ಶಿಕ್ಷಣ ಮಾಧ್ಯಮ ಫ್ಲೆಮಿಷ್ ಅಥವಾ ಫ್ರೆಂಚ್. 1930ರಲ್ಲಿ ಗೆಂಟ್ ವಿಶ್ವವಿದ್ಯಾಲಯವನ್ನು ಫ್ಲೆಮಿಷ್ ವಿಶ್ವವಿದ್ಯಾಲಯವಾಗಿ ಪರಿವರ್ತಿಸಲಾಯಿತು. ಫ್ಲೆಮಿಷ್ ಭಾಷೆ ಆಡುವ ಪ್ರದೇಶದಲ್ಲಿರುವ ಅಧಿಕಾರಿಗಳು ಸಾಮಾನ್ಯವಾಗಿ ಎರಡೂ ಭಾಷೆಗಳನ್ನು ಬಲ್ಲವರು. ಫ್ಲೆಮಿಂಗರ ಮತ್ತು ವಾಲೂನ್‍ಗಳ ನಡುವೆ ಭಿನ್ನತೆ ಹೆಚ್ಚಿಸಲು ಈ ಶತಮಾನದ 1933ರ ದಶಕದಲ್ಲಿ ನಾಟ್ಸಿಗಳು ಪ್ರಯತ್ನಿಸಿದರು. ಕೆಲವರು ಇವರ ಮಾತನ್ನು ನಂಬಿದ್ದರು. 1940ರಲ್ಲಿ ಜರ್ಮನರು ಬೆಲ್ಜಿಯಮ್ಮನ್ನು ಆಕ್ರಮಿಸಿಕೊಳ್ಳುವ ವೇಳೆಗೆ ಬೆಲ್ಜಿಯನ್ನರಿಗೆ ನಾಟ್ಸಿಗಳ ತಂತ್ರ ಅರ್ಥವಾಗಿತ್ತು. ಅವರು ಮೋಸಹೋಗಲಿಲ್ಲ. ಇವೆರಡು ಭಾಷೆಗಳಲ್ಲದೆ ಜರ್ಮನ್ ಭಾಷೆಯೂ ಇಲ್ಲಿ ಸ್ವಲ್ಪ ಪ್ರಚಾರದಲ್ಲಿದೆ. 

	ಬೆಲ್ಜಿಯಮ್ಮಿನಲ್ಲಿ ಅನೇಕ ಪ್ರಾಚೀನ ಕಟ್ಟಡಗಳೂ ಕಲಾಕೃತಿಗಳೂ ಇವೆ. ಬ್ರಸೆಲ್ಸಿನಲ್ಲಿರುವ, 15ನೆಯ ಶತಮಾನ ಸಂತ ಗುಡುಲೆಯ ಕ್ಯಾಥೊಲಿಕ್ ಚರ್ಚೂ ಪುರಭವನವೂ ಮುಖ್ಯವಾದುವು. 9ನೆಯ ಶತಮಾನದ ಫ್ಲಾಂಡರ್ಸ್‍ನ ಕೌಂಟ್‍ಗಳ ಕೋಟೆಮನೆಗಳ ಅವಶೇಷಗಳು ಗೆಂಟ್‍ನಲ್ಲಿವೆ. ಎರಡನೆಯ ಮಹಾಯುದ್ಧದ ಅನಂತರವೂ ಯೂರೊಪಿನಲ್ಲಿ ನಾಶವಾಗದೆ ಉಳಿದಿರುವ ಮಧ್ಯಯುಗೀನ ಪಟ್ಟಣ ಬ್ರೂಷ್, ವ್ಯಾನ್‍ಐಕ್, ವ್ಯಾನ್‍ಡೈಕ್, ಪಾಲ್‍ರೂಬೆನ್ಸ್ ಇವರು ಇಲ್ಲಿ 14ರಿಂದ 17ನೆಯ ಶತಮಾನಗಳ ನಡುವಣ ಕಾಲದಲ್ಲಿದ್ದ ಪ್ರಸಿದ್ಧ ಕಲಾವಿದರು. ಆಧುನಿಕ ಬೆಲ್ಜಿಯಮ್ಮಿನ ಪ್ರಸಿದ್ಧ ಕಲಾಕಾರರು-ಆಲ್‍ಫ್ರೆಡ್ ಸ್ಟೀವನ್ಸ್ (1828-1906), ಜೇಮ್ಸ್ ಎನ್ಸಾರ್ (1860-1949) ಮತ್ತು ಮಾರಿಸ್ ಡಿ ವ್ಲಾಮಿಂಕ್ (1876-1958). 

	ಇತಿಹಾಸ: ಯೂರೋಪಿನ ರಾಷ್ಟ್ರಗಳಲ್ಲಿ ಬೆಲ್ಜಿಯಮ್ ಈಚಿನದು. ಆದರೆ ಇದರ ಹೆಸರು ಪ್ರಾಚೀನ ಕಾಲದಿಂದ ಬಂದದ್ದು. ಆಲ್ಪ್ಸಿನ ಆಚೆಯ ಗಾಲ್ ಪ್ರದೇಶದ ಮೇಲೆ ಜ್ಯೂಲಿಯಸ್ ಸೀಸರ್ ದಂಡಯಾತ್ರೆ ಮಾಡಿದಾಗ (ಕ್ರಿ.ಪೂ. 59-50) ಇಲ್ಲಿದ್ದ ಬೆಲ್ಗೇ ಜನರನ್ನು ಅವನು ಜಯಿಸಲು ಬಹಳ ಶ್ರಮಪಡಬೇಕಾಯಿತು. ಬೆಲ್ಗೇಗಳು ರೈನ್‍ನದಿಯ ಪೂರ್ವದಂಡೆಯ ಕಡೆಯಿಂದ ರೈನ್ ಮತ್ತು ಸೀನ್ ನದಿಗಳ ನಡುವಣ ಪ್ರದೇಶದಲ್ಲಿ ನೆಲಸಿದ್ದರು. ಇದು ರೋಮನ್ ಚಕ್ರಾಧಿಪತ್ಯದ ಗಾಲಿಯ ಬೆಲ್ಜಿಕಾ ಎಂದು ಹೆಸರಾಯಿತು. ಕ್ರಿ.ಶ. 5ನೆಯ ಶತಮಾನದಲ್ಲಿ ರೋಮನ್ ಸೇನೆ ಇಲ್ಲಿಂದ ಕಾಲ್ತೆಗೆದಾಗ ಈ ಹೆಸರು ಮರೆಯಾಯಿತು.  18ನೆಯ ಶತಮಾನದ ಕೊನೆಯ ವೇಳೆಗೆ ಇದು ಮತ್ತೆ ಇತಿಹಾಸದಲ್ಲಿ ತಲೆದೋರಿದ್ದು. ಈಗಿನ ಬೆಲ್ಜಿಯಮ್, ನೆದರ್ಲೆಂಡ್ಸ್, ಲಕ್ಸೆಂಬರ್ಗ್‍ಗಳನ್ನೊಳಗೊಂಡ ಇಡೀ ತಗ್ಗು ನಾಡು ಅಥವಾ ನೆದರ್ಲೆಂಡ್ಸ್ 771 ರಿಂದ 814ರ ತನಕ ಆಳುತ್ತಿದ್ದ ಷಾರ್ಲ್‍ಮೇನನ ಚಕ್ರಾಧಿಪತ್ಯದ ಅಂಗವಾಗಿತ್ತು. 843ರಲ್ಲಿ ಇದು ಷಾರ್ಲ್‍ಮೇನನ ಮೂವರು ಮೊಮ್ಮಕ್ಕಳಲ್ಲಿ ಭಾಗವಾಯಿತು. ಪಶ್ಚಿಮ ಭಾಗ ಸ್ಥಾಲವಾಗಿ ಇಂದಿನ ಫ್ರಾನ್ಸ್ ಪ್ರದೇಶ ಒಬ್ಬನಿಗೂ ಆಧುನಿಕ ಜರ್ಮನಿಯನ್ನು ಸ್ಥೂಲವಾಗಿ ಒಳಗೊಂಡ ಪೂರ್ವಭಾಗ ಇನ್ನೊಬ್ಬನಿಗೂ ಮಧ್ಯಭಾಗ (ಲೊತೇರ್) ಮತ್ತೊಬ್ಬನಿಗೂ ಸೇರಿದವು. ಈ ಮೂರನೆ ಭಾಗಕ್ಕೆ ಲೋತ್ಕರಿಂಜಿಯಾ ಎಂದು ಹೆಸರಾಯಿತು. ಇದರಲ್ಲಿ ತಗ್ಗುನಾಡು, ಬರ್ಗಂಡಿ, ಸ್ವಿಟ್ಜರ್ಲೆಂಡ್, ಸವಾಯ್, ಉತ್ತರ ಇಟಲಿ ಮತ್ತು ಲೊರೆಟ್ ಸೇರಿದ್ದುವು. ಮುಂದಿನ ಶತಮಾನಗಳಲ್ಲಿ ಲೋತ್ಕರಿಂಜಿಯ ಒಡೆಯಿತು. ತಗ್ಗುನಾಡು 15ನೆಯ ಶತಮಾನದಲ್ಲಿ ಬರ್ಗಂಡಿಯ ಡ್ಯೂಕರ ಒಡೆತನಕ್ಕೆ ಬಂತು. ಈ ಮನೆತನದ ಆಳ್ವಿಕೆಯಲ್ಲಿ ಕೊನೆಯವಳಾದ ಮೇರಿ ಆಸ್ಟ್ರಿಯದ ಮ್ಯಾಕ್ಸಿಮಿಲಿಯನನ್ನು ಮದುವೆಯಾದಳು. ಅವರ ಮಗ ಫಿಲಿಫ್ ಸ್ಪೇನ್ ಸಿಂಹಾಸನದ ಉತ್ತರಾಧಿಕಾರಿಣಿಯನ್ನು ವರಿಸಿದ. ಹೀಗೆ ಈ ನಾಡು ಸ್ಪೇನ್ ದೊರೆಯ ಆಳ್ವಿಕೆಗೆ ಒಳಪಟ್ಟಿತು. 

	ಆರೆಂಜ್ ರಾಜಕುಮಾರ ವಿಲಿಯಮ್ ದಿ ಸೈಲೆಂಟ್‍ನ (1533-84) ನಾಯಕತ್ವದಲ್ಲಿ ನೆದರ್ಲೆಂಡ್ಸ್ ಸ್ಪೇನಿನ ವಿರುದ್ಧ ಬಂಡುಹೂಡಿತು. ಉತ್ತರಭಾಗ ಸ್ವತಂತ್ರವಾಯಿತು. ದಕ್ಷಿಣ ಭಾಗವನ್ನು ಸ್ಪೇನ್ ಮತ್ತೆ ಗೆದ್ದುಕೊಂಡಿತು. 1713ರಲ್ಲಿ ಇದು ಆಸ್ಟ್ರಿಯದ ವಶಕ್ಕೆ ವರ್ಗವಾಯಿತು. 1789ರಲಿ ಕೆಲವರು ದಂಗೆ ಎದ್ದು ಬೆಲ್ಜಿಯಮ್ ಸಂಯುಕ್ತ ಸಂಸ್ಥಾನ ಸ್ಥಾಪಿಸಿದರು. ಆದರೂ ವಾಸ್ತವಾಗಿ ಇದು ಆಸ್ಟ್ರಿಯದ ಅಧೀನದಲ್ಲೇ ಉಳಿಯಿತು. 1794ರಲ್ಲಿ ಫ್ರಾನ್ಸ್ ಇದನ್ನು ಗೆದ್ದುಕೊಂಡಿತು. ಇದೆ ಒಂಬತ್ತು ಪ್ರಾಂತ್ಯಗಳು ಒಂಬತ್ತು ವಿಭಾಗಗಳಾದುವು. 

	1831ರಲ್ಲಿ ಬೆಲ್ಜಿಯನ್ನರು ಸಾಕ್ಸೆ-ಕೋಬರ್ಗ್‍ನ ಲಿಯೊಪೋಲ್ಡರನ್ನು (1790-1865) ತಮ್ಮ ದೊರೆಯಾಗಿ ಆರಿಸಿದರು. ಇವರ ಅನಂತರ 2ನೆಯ ಲಿಯೊಪೋಲ್ಡ್ (1835-1909) ಆಳಿದ. ಇವರ ಒಬ್ಬನೇ ಮಗ 1869ರಲ್ಲಿ ತೀರಿಕೊಂಡಿದ್ದ. ಅವನಿಗೆ ಪುತ್ರಿಯರಿದ್ದರಾದರೂ ಬೆಲ್ಜಿಯಮ್ ಸಿಂಹಾಸನಕ್ಕೆ ಸ್ತ್ರೀಯರು ಬರಬಾರದೆಂಬ ಕಟ್ಟಿನಿಂದಾಗಿ ಅವರ ಸೋದರಪುತ್ರ ಆಲ್ಬರ್ಟ್ (1875-1934) ಆಳಿದ. ಅನಂತರ ಬಂದವನು ಇವನ ಮಗ 3ನೆಯ ಲಿಯೊಪೋಲ್ಡ್. 

	ನೆಪೋಲಿಯಾನಿಕ್ ಯುದ್ಧಗಳ ಕೊನೆಯ ಕದನ 1815ರಲ್ಲಿ ಬ್ರಾಬಾಂಟಿನ ವಾಟರ್ಲೂನಲ್ಲಿ ನಡೆಯಿತು. ಅನಂತರದ ಯೂರೋಪಿನ ಪುನವ್ರ್ಯವಸ್ಥೆಯಲ್ಲಿ ಉತ್ತರ ದಕ್ಷಿಣ ನೆದರ್ಲೆಂಡ್ಸ್ ಒಂದಾದವು. ಆದರೆ ಇವೆರಡೂ ಬಹುಕಾಲ ಬೇರೆ ಬೇರೆ ಇದದ್ದರಿಂದ ಭಾವೈಕ್ಯ ಸಾಧ್ಯವಾಗಲಿಲ್ಲ. ದಕ್ಷಿಣ ಭಾಗವಾದ ಬೆಲ್ಜಿಯಮ್ಮಿನ ಸ್ವಾತಂತ್ರ್ಯಕ್ಕೆ ಯೂರೋಪಿನ ಪ್ರಬಲ ರಾಷ್ಟ್ರಗಳು 1839ರಲ್ಲಿ ಮಾನ್ಯತೆ ನೀಡಿದುವು. ಇದನ್ನು ತಟಸ್ಥ ರಾಷ್ಟ್ರವಾಗಿ ಉಳಿಸುವ ಭರವಸೆ ನೀಡಿದುವು. 

	ಆದರೆ 1914ರಲ್ಲಿ ಜರ್ಮನಿಯ ಸೈನ್ಯ ಇದರ ಮೇಲೆ ಆಕ್ರಮಣ ನಡೆಸಿತು. ಇದರ ಆಗ್ನೇಯ ಭಾಗದಲ್ಲಿ ಒಂದು ತುಣಕು ಮಾತ್ರ ಮಿತ್ರ ರಾಷ್ಟ್ರಗಳ ವಶದಲ್ಲಿ ಉಳಿದಿತ್ತು. 1918ರಲ್ಲಿ ಬೆಲ್ಜಿಯಮ್ ಮತ್ತೆ ಸ್ವಾತಂತ್ರ್ಯ ಪಡೆಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ (1914-18) ಬೆಲ್ಜಿಯಮ್ಮಿನ ಬಹುಭಾಗ ಬಹಳ ನಷ್ಟಕ್ಕೆ ಒಳಗಾಗಿತ್ತು. ಎರಡನೆ ಮಹಾಯುದ್ಧದ ಕಾಲದಲ್ಲಿ ಇದನ್ನು ಶತ್ರು ಸೇನೆ ಮತ್ತೆ ಆಕ್ರಮಿಸಿತು. (1940), ಮಿತ್ರ ರಾಷ್ಟ್ರಗಳು ಇದನ್ನು ವಿಮೋಚನೆಗೊಳಿಸಿದ ಮೇಲೆ (1949) ಅಮೆರಿಕನ್ ಸೇನೆಗಳು ಈ ದೇಶದ ಮೂಲಕ ಜರ್ಮನಿಗೆ ಹೋಗುವಾಗ ಇಲ್ಲಿ ತಂಗಿದ್ದಕ್ಕೆ ಅಪಾರವಾದ ಹಣವನ್ನು ಶುಲ್ಕವಾಗಿ ನೀಡುತ್ತಿದ್ದುವು. ಇದರಿಂದ ಬೆಲ್ಜಿಯಮ್ ನೆರೆಯ ರಾಜ್ಯಗಳಿಗಿಂತ ಹೆಚ್ಚು ಶ್ರೀಮಂತವಾಯಿತು. 1948ರಲ್ಲಿ ಬೆಲ್ಜಿಯಮ್, ನೆದರ್ಲೆಂಡ್ ಮತ್ತು ಲಕ್ಸೆಂಬರ್ಗ್‍ಗಳು ಸೇರಿ ಬೆನೆಲಕ್ಸ್ ಎಂಬ ಹೆಸರಿನ ಸುಂಕದ ಒಕ್ಕೂಟ ಸ್ಥಾಪಿಸಿಕೊಂಡವು. 

	ಸಂವಿಧಾನ, ಆಡಳಿತ: 1831ರ ಸಂವಿಧಾನದ ಪ್ರಕಾರ ಬೆಲ್ಜಿಯಮ್ ಸಂವೈಧಾನಿಕ ಪ್ರಾತಿನಿಧಿಕ ಹಾಗೂ ವಂಶಪಾರಂಪರಿಕ ರಾಜಪ್ರಭುತ್ವ. ಸರ್ಕಾರದ ಮುಖ್ಯಸ್ಥ ದೊರೆ. ವಿಧಾನಮಂಡಲದಲ್ಲಿ ಎರಡು ಸದನಗಳಿವೆ. ಸೆನೆಟಿನ ಸದಸ್ಯರು ನಾಲ್ಕು ವರ್ಷಗಳಿಗೆ ಒಮ್ಮೆ ಆಯ್ಕೆಯಾಗುತ್ತಾರೆ. ಚುನಾವಣೆ ಭಾಗಶಃ ಪ್ರತ್ಯಕ್ಷ, ಭಾಗಶಃ ಪರೋಕ್ಷ. ಚೇಂಬರ್ ಆಫ್ ಡೆಪ್ಯುಟೇಷನ್‍ನ ಸದಸ್ಯರೂ ನಾಲ್ಕು ವರ್ಷಗಳಿಗೊಮ್ಮೆ ಚುನಾಯಿತರಾಗುತ್ತಾರೆ. ಆದರೆ ಇವರ ಆಯ್ಕೆ ಅನುಪಾತೀಯ ಪ್ರಾತಿನಿಧ್ಯದ ಮೂಲಕ. ಸಾರ್ವತ್ರಿಕ ಮತದಾನ ಜಾರಿಯಲ್ಲಿದೆ. ಮತ ನೀಡುವುದು ಕಡ್ಡಾಯ. ಮಂತ್ರಿಗಳನ್ನು ನೇಮಕ ಮಾಡುವ ಮತ್ತು ವಜಾಮಾಡುವ ಆಧಿಕಾರ ದೊರೆಗೆ ಇದೆ. ವೈಧಾನಿಕ ಅಧಿಕಾರವನ್ನು ದೊರೆಯೂ ವಿಧಾನ ಮಂಡಲವೂ ಹಂಚಿಕೊಂಡಿವೆ. 

	ಬೆಲ್ಜಿಯಮ್ಮನ್ನು ಆಂಟ್‍ವರ್ಪ್, ಬ್ರಾಬನ್, ಪಶ್ಚಿಮ ಫ್ಲಾಂಡರ್ಸ್, ಫ್ಲಾಡರ್ಸ್, ಹೇನಾಟ್, ಲಿಯಾಷ್, ಲಿಂಬರ್ಗ್, ಲಕ್ಸೆಂಬರ್ಗ್ ಮತ್ತು ನಾಮುರ್ ಎಂಬ ಒಂಬತ್ತು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ.			 (ಎಚ್.ಎಸ್.ಕೆ.)

	ಶಿಕ್ಷಣ ಪದ್ಧತಿ: ಬೆಲ್ಜಿಯಮ್ ಯೂರೊಪಿನ ಸಣ್ಣ ರಾಷ್ಟ್ರ. ಇಲ್ಲಿಯ ಶಿಕ್ಞಣ ಪದ್ಧತಿ ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಇಲ್ಲಿ ವಾಸಿಸುವ ಜನತೆಯ ವಿವಿಧ ಭಾಷೆಗಳು, ಧಾರ್ಮಿಕ ಸಂಪ್ರದಾಯಗಳು ಹಾಗೂ ಸರ್ಕಾರದ ನಿಯಂತ್ರಣದಿಂದ ವಿಮುಕ್ತಿಗೊಂಡ ಸ್ವತಂತ್ರ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಿದ್ಯಾಭ್ಯಾಸ ಕ್ರಮಗಳು ಈ ವಿಶಿಷ್ಟತೆಗೆ ಕಾರಣಗಳು ಎನ್ನಬಹುದು.   

	ಇಲ್ಲಿಯ ಶಿಕ್ಷಣ ಸರ್ಕಾರದ ಸರ್ವಸ್ವಾಮ್ಯವಾಗುವುದರ ಬದಲು ಖಾಸಗಿ ಹಾಗೂ ಸ್ವತಂತ್ರ ಸಂಸ್ಥೆಗಳ ಒಡೆತನಕ್ಕೂ (ಬೆಲ್ಜಿಯಮ್ಮಿನ ರಾಷ್ಟ್ರ ಘಟನೆಯ 17ನೆಯ ಕಾಲಮ್ಮಿನ ಪ್ರಕಾರ) ಅವಕಾಶ ಕಲ್ಪಿಸಿ ಆ ಮೂಲಕ ರಾಷ್ಟ್ರದಲ್ಲಿ ಸಮಾಂತರ ಶಿಕ್ಷಣ ವ್ಯವಸ್ಥೆಗೆ ಅನುವುಮಾಡಿಕೊಟ್ಟಿದೆ. ಇದರಿಂದ ಖಾಸಗಿ ಯತ್ನಗಳಿಗೆ ಪ್ರೋತ್ಸಾಹ ಸಿಗುವುದರ ಜೊತೆಗೆ ಶಿಕ್ಷಣ ನಿಯಂತ್ರಣದ ಬಗ್ಗೆ ವಿಕೇಂದ್ರೀಕರಣಕ್ಕೂ ಅವಕಾಶ ಕಲ್ಪಿಸಿ ಪ್ರಾಯೋಗಿಕ ಹಾಗೂ ಸಂಶೋಧನಾತ್ಮಕ ಪ್ರಯತ್ನಗಳಿಗೆ ಉತ್ತೇಜನವೀಯಲಾಗಿದೆ. 

	ಇಲ್ಲಿ ಎರಡು ಸಮಾಂತರ ಶಾಲಾ ವ್ಯವಸ್ಥೆಯಿದೆ-ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪೌರಸಭೆಯಂಥ ಸ್ಥಳೀಯ ಸರ್ಕಾರಗಳು ವ್ಯವಸ್ಥೆಗೊಳಿಸಿ ನಡೆಸುತ್ತಿರುವ ಶಾಲೆಗಳು ಒಂದು ವ್ಯವಸ್ಥೆಗೆ ಸೇರಿದರೆ, ರೋಮನ್ ಕ್ಯಾಥೊಲಿಕ್ ಪಂಥದವರೂ ಇತರ ಖಾಸಗಿ ಸಂಘಸಂಸ್ಥೆಗಳವರೂ ನಡೆಸುತ್ತಿರುವ ಶಾಲೆಗಳು ಮತ್ತೊಂದು ವ್ಯವಸ್ಥೆಗೆ ಸೇರುತ್ತವೆ. ಪೋಷಕರು ಇವುಗಳಲ್ಲಿ ಯಾವ ಶಾಲೆಗಾದರೂ ತಮ್ಮ ಮಕ್ಕಳನ್ನು ಕಳಿಸುವ ಹಕ್ಕನ್ನು ಸರ್ಕಾರ ನೀಡಿದೆ. ಆದರೆ ಈ ಸೌಲಭ್ಯ ಸಂಗೀತ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಲಾಗದು. ಶಿಕ್ಷಣದ ಹಣಕಾಸಿನ ವಿಚಾರದಲ್ಲೂ ಒಂದು ರೀತಿಯ ದ್ವಂದ್ವ ವ್ಯವಸ್ಥೆ ಕಾಣಬರುತ್ತದೆ; ಅದು ಒಂದು ರೀತಿಯಲ್ಲಿ ಸಹಯೋಗ ಹೊಣೆಗಾರಿಕೆಯೇ ಆಗಿದೆ ಎನ್ನಬಹುದು. ಕೇಂದ್ರ ಸರ್ಕಾರ ಕಿಂಡರ್‍ಗಾರ್ಟನ್, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಧ್ಯಾಪಕರ ಪ್ರಶಿಕ್ಷಣ ಶಾಲೆ, ತಾಂತ್ರಿಕ ಶಾಲೆ, ಕಲಾಶಿಕ್ಷಣ ಶಾಲೆ ಮುಂತಾದವನ್ನು ನಡೆಸುತ್ತಿದೆ. ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳೂ ಅವನ್ನು ನಡೆಸುತ್ತಿವೆ. ಆಯಾ ಸರ್ಕಾರ ಆಯಾ ಶಾಲೆಗಳ ಖರ್ಚನ್ನು ನಿರ್ವಹಿಸುತ್ತದೆ. ಇವುಗಳ ಜೊತೆಗೆ ಕೇಂದ್ರ ಸರ್ಕಾರ ವಿಶ್ವವಿದ್ಯಾಲಯಗಳನ್ನೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ನಡೆಸುತ್ತಿದ್ದು ಅವುಗಳ ವೆಚ್ಚವನ್ನು ತಾನೇ ಭರಿಸುತ್ತಿದೆ. ಇತರ ಶಿಕ್ಷಣ ಸಂಸ್ಥೆಗಳ ವೆಚ್ಚವನ್ನು ಕೇಂದ್ರಸರ್ಕಾರ, ಪ್ರಾಂತೀಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರಗಳು ಸಹಯೋಗದಿಂದ ನಿರ್ವಹಿಸುತ್ತವೆ. ಸರ್ಕಾರದ ಮೇಲ್ವಿಚಾರಣೆಗೆ ಒಳಪಟ್ಟು ಸ್ವತಂತ್ರ ಶಿಕ್ಷಣ ಸಂಸ್ಥೆಗಳು ಕೇಂದ್ರ ಅಥವಾ ಪ್ರಾಂತೀಯ ಸರ್ಕಾರದ ಅನುದಾನ ಪಡೆದುಕೊಳ್ಳುತ್ತಿವೆ. ರೋಮನ್ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳು ಕೇಂದ್ರ ಸರ್ಕಾರ ನೀಡುವ ಅನುದಾನ ಹಾಗೂ ಖಾಸಗಿ ಧನಬಲದಿಂದ ನಡೆಯುತ್ತಿವೆ. ಕೆಲವು ಸ್ವತಂತ್ರ ಸಂಸ್ಥೆಗಳು ಸರ್ಕಾರದ ಮೇಲ್ವಿಚಾರಣೆಗೊಳಪಡದೆ ಉಳಿದುಕೊಂಡಿವೆ. ಅವಕ್ಕೆ ಯಾವ ಅನುದಾನವೂ ದೊರಕುತ್ತಿಲ್ಲ. ಈಚೆಗೆ ಕಾರ್ಯ ನಿರ್ವಹಣೆಯ ವೆಚ್ಚ ಅಧಿಕವಾದಂತೆ ಅಂಥ ಸಂಸ್ಥೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. 

	ರಾಷ್ಟ್ರದ ಎಲ್ಲ ಶಾಲೆಗಳೂ ಮಕ್ಕಳಿಗೆ ಶುಲ್ಕ ವಿನಾಯಿತಿಯಿದ್ದು ಪ್ರಾಥಮಿಕ ಪೂರ್ವದ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಪುಸ್ತಕಗಳ ವಿತರಣ ವ್ಯವಸ್ಥೆ ಉಂಟು. ಆದರೆ ಸರ್ಕಾರದ ಅನುದಾನ ಪಡೆಯದ ಸ್ವತಂತ್ರ ಶಾಲೆಗಳು ಮಾತ್ರ ಶುಲ್ಕ ವಿಧಿಸುತ್ತವೆ. 

	6ನೆಯ ವರ್ಷದಿಂದ 14ನೆಯ ವರ್ಷದ ತನಕ ಶಿಕ್ಷಣ ಕಡ್ಡಾಯ ಮಾಡಲಾಗಿದೆ. ಶಾಲೆಗಳಲ್ಲಿ ಮತೀಯ ಎನ್ನಬಹುದಾದ ಧಾರ್ಮಿಕ ಶಿಕ್ಷಣಕ್ಕೆ ಅವಕಾಶವಿಲ್ಲ. ಶಾಲೆಗಳಲ್ಲಿ ಧಾರ್ಮಿಕ ಅಥವಾ ನೈತಿಕ ಶಿಕ್ಷಣ ವಾರಕ್ಕೆರಡು ಗಂಟೆ ಕಾಲ ನೀಡಬಹುದೆಂದು ಸೂಚಿಸಿದರೂ ಅವೆರಡರಲ್ಲಿ ಯಾವುದಕ್ಕಾದರೂ ಮಕ್ಕಳನ್ನು ಕಳಿಸಬಹುದಾದ ಸ್ವಾತಂತ್ರ್ಯ ಪೋಷಕರಿಗಿದೆ. ಪ್ರಾಟೆಸ್ಟೆಂಟ್, ರೋಮನ್ ಕ್ಯಾಥೊಲಿಕ್ ಮತ್ತು ಯಹೂದ್ಯರು ನಡೆಸುತ್ತಿರುವ ಶಾಲೆಗಳಲ್ಲಿ ಆಯಾ ಮತೀಯ ಸಂಬಂಧವಾದ ಧರ್ಮಬೋಧನೆ ಉಂಟು. ನೀತಿಬೋಧೆ ಮಾತ್ರ ಯಾವೊಂದು ಧಾರ್ಮಿಕ ಪಂಥಕ್ಕೂ ವಿಶಿಷ್ಟವೆನಿಸದೆ ಸಾರ್ವತ್ರಿಕ ನೈತಿಕ ತತ್ತ್ವಗಳನ್ನು ಒಳಗೊಂಡಿರುತ್ತದೆ. 

	ಶಿಕ್ಷಣ ಮಾಧ್ಯಮದ ಸಮಸ್ಯೆ: 1932ರಲ್ಲಿ ಅಂಗೀಕರಿಸಿದ ಒಂದು ಶಾಸನದ ಪ್ರಕಾರ ಬೆಲ್ಜಿಯಮ್ಮಿನಲ್ಲಿ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಅವರವರ ಮಾತೃ ಭಾಷೆಯಲ್ಲಿ ಅಥವಾ ಅವರು ಆಡುವ ಭಾಷೆಯಲ್ಲಿ ಶಿಕ್ಷಣವೀಯಬೇಕೆಂದು ನಿಗದಿಯಾಯಿತು. ಇಲ್ಲಿ ಮುಖ್ಯವಾಗಿ ಡಚ್, ಫ್ರೆಂಚ್ ಮತ್ತು ಜರ್ಮನ್ ಭಾಷೆಯನ್ನಾಡುವ ಜನರಿದ್ದಾರೆ. ಬ್ರಸೆಲ್ಸ್‍ನಂಥ ಮಹಾನಗರಗಳಲ್ಲಿ ಎರಡು ಭಾಷೆಗಳು ಪ್ರಚಾರದಲ್ಲಿರುವ ಕೆಲವು ಪೌರಸಭಾಕ್ಷೇತ್ರಗಳಲ್ಲಿ ಮಕ್ಕಳ ಮಾತೃಭಾಷೆಯಾಗುವುದು, ಆಡುವ ಭಾಷೆ ಯಾವುದು ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿ ಬಿಕ್ಕಟ್ಟಿಗೆ ಎಡೆಗೊಡುತ್ತಿದೆ. ಮೇಲಿನ ಶಾಸನ ವಿಶ್ವವಿದ್ಯಾಲಯಗಳನ್ನುಳಿದ ಮಿಕ್ಕ ಎಲ್ಲ ಹಂತದ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಇದರಿಂದಲೂ ಒಂದು ವಿಧದ ಬಿಕ್ಕಟ್ಟು ಹುಟ್ಟಿಕೊಳ್ಳುತ್ತಿದೆ. ಬೆಲ್ಜಿಯಮ್ಮಿನ ಡಚ್ ಭಾಷೆಯಾಡುವ ಲುವೆಯಿನ್ ವಿಶ್ವವಿದ್ಯಾಲಯದಲ್ಲಿ ಫ್ರೆಂಚ್ ಭಾಷೆ ಆಡುವ ಒಂದು ವಿಭಾಗವಿದ್ದು ಅದು ನಿತ್ಯಘರ್ಷಣೆಗೆ ಎಡೆಮಾಡಿಕೊಡುತ್ತಿದೆ. ಕೆಲವು ವೇಳೆ ಘಟನೆಗಳು ರಾಜಕೀಯ ಸ್ವರೂಪ ತಾಳಿ ಉಲ್ಬಣಾವಸ್ಥೆ ಮುಟ್ಟುವುದೂ ಉಂಟು. 

	ಶಿಕ್ಷಣದ ಆಡಳಿತ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ರಾಷ್ಟ್ರದ (ನೌಕಾ ಮತ್ತು ಬಾಲಾಪರಾಧ ಶಾಲೆಗಳನ್ನುಳಿದು) ಎಲ್ಲ ಶಾಲೆಗಳ ಕಾರ್ಯಕ್ರಮಗಳಿಗೂ ಸ್ಥೂಲ ನಿಯೋಜನಾಧಿಕಾರ (ರೆಗ್ಯುಲೆಟಿಂಗ್) ಹೊಂದಿದೆ. ಪ್ರಾಂತೀಯ ಸರ್ಕಾರಗಳು ಪೌರಸಭೆಗಳು ಕೇಂದ್ರ ಸಚಿವಾಲಯ ಸೂಚಿಸುವ ಪರಿಮಿತಿಯ ಚೌಕಟ್ಟಿನೊಳಗೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತವೆ. ಕ್ಯಾಥೊಲಿಕ್ ಶಾಲೆಗಳು ಮತೀಯ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಶಿಕ್ಷಣದ ಮೇಲ್ವಿಚಾರಣೆಗೆ ಕೇಂದ್ರಸರ್ಕಾರದ ತನಿಖಾಧಿಕಾರಿಗಳಂತೆ ಕ್ಯಾಥೊಲಿಕ್ ಮಠದ ತನಿಖಾಧಿಕಾರಿಗಳೂ ಇರುವರು. ಎಲ್ಲ ಕ್ಯಾಥೊಲಿಕ್ ಶಾಲೆಗಳ ಶಿಕ್ಷಣದಲ್ಲಿ ಸಮನ್ವಯ ಸಾಧಿಸಲು ಕ್ಯಾಥೊಲಿಕ್ ಕೇಂದ್ರ ಶಿಕ್ಷಣ ಮಂಡಲಿ ಇದೆ. ರಾಷ್ಟ್ರದ ಜನಸಂಖ್ಯೆಯ 1/4 ಭಾಗ ಶಾಲಾ ವಿದ್ಯಾರ್ಥಿಗಳಾಗಿರುವರು. 1966 ಗಣತಿಯ ಪ್ರಕಾರ ವಿದ್ಯಾರ್ಥಿಗಳ ಸಂಖ್ಯೆ 21ಲಕ್ಷ. ರಾಷ್ಟ್ರ ಸರ್ಕಾರದ ಒಟ್ಟು ಆದಾಯದಲ್ಲಿ ಶೇಕಡ 4.3 ರಷ್ಟು ಹಣವನ್ನು ಶಿಕ್ಷಣಕ್ಕೆ ವೆಚ್ಚ ಮಾಡುತ್ತಿದೆ.

	ಶಿಕ್ಷಣದ ಅಂಗರಚನೆ: 8 ವರ್ಷದ ಪ್ರಾಥಮಿಕ ಶಿಕ್ಷಣ, 6 ವರ್ಷದ ಪ್ರೌಢಶಿಕ್ಷಣ, 3 ರಿಂದ 6 ವರ್ಷದ ಪದವೀಶಿಕ್ಷಣ-ಇದು ಇಲ್ಲಿಯ ಶಿಕ್ಷಣ ವ್ಯವಸ್ಥೆ. 6 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಏರ್ಪಟ್ಟಿರುವ ಪ್ರಾಥಮಿಕ ಪೂರ್ವದ ಶಿಕ್ಷಣವೂ ಈ ರಚನೆಯಲ್ಲಿ ಸೇರಿಕೊಂಡಿವೆ. ಜೊತೆಗೆ ಅಧ್ಯಾಪಕರ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ಖಾಸಗಿ ಶಿಕ್ಷಣ ಸೌಲಭ್ಯ ಇವೂ ಇದರಲ್ಲಿ ಸೇರಿವೆ.

	ಪ್ರಾಥಮಿಕ ಪೂರ್ವ ಶಿಕ್ಷಣ: ಕಡ್ಡಾಯ ಶಿಕ್ಷಣದ ವಯಸ್ಸು ಮುಟ್ಟದ ಎಂದರೆ 6 ವರ್ಷಕ್ಕೂ ಕಡಿಮೆ ವಯಸ್ಸಿನವರಿಗೆ ಕಿಂಡರ್‍ಗಾರ್ಟನ್ ಶಾಲೆಗಳು ಸರ್ಕಾರದಿಂದ ಏರ್ಪಟ್ಟಿವೆ. ಅವು ಪ್ರಾಥಮಿಕ ಶಿಕ್ಷಣದ ನಿಯಮವನ್ನೇ ಅನುಸರಿಸುತ್ತವೆ. ಎಲ್ಲ ಸರ್ಕಾರಿ ಶಿಶುವಿಹಾರಗಳನ್ನೂ ಕೇಂದ್ರ ಸಚಿವಾಲಯ ನಡೆಸುತ್ತದೆ. ಪ್ರೌಢ ಶಾಲೆಯ ಹಾಗೂ ಅಧ್ಯಾಪಕರ ಪ್ರಶಿಕ್ಷಣ ಶಾಲೆಗೆ ಸೇರಿದ ಶಿಶು ವಿಹಾರಗಳನ್ನು ಪ್ರಾಂತೀಯ ಪ್ರೌಢಶಾಲಾ ನಿರ್ದೇಶಕರು ಮೇಲ್ವಿಚಾರಣೆ ನಡೆಸುವರು. ಈ ಕಾರ್ಯವನ್ನು ಮಹಿಳಾ ತನಿಖಾಧಿಕಾರಿಗಳಿಗೆ ವಹಿಸಬೇಕೆಂದು ಯೋಚಿಸಲಾಗುತ್ತಿದೆ. ಈ ವಯೋಮಾನದ ಮಕ್ಕಳಲ್ಲಿ 2/3 ರಷ್ಟು ಮಂದಿ ಶಿಶು ವಿಹಾರಗಳಲ್ಲಿ ಶಿಕ್ಷಣ ಪಡೆಯುವರು. 

	ಪ್ರಾಥಮಿಕಪೂರ್ವದ ಶಿಕ್ಷಣವನ್ನು ಕಿಂಡರ್‍ಗಾರ್ಟನ್ ಎಂದು ಕರೆಯಲಾಗುತ್ತಿದ್ದರೂ ಮೆರಿಯ ಮಾಂಟೆಸೋರಿ, ಫೀಡ್ರಿಕ್ ಫ್ರೋಬೆಲ್ ಮತ್ತು ಓವಿಡೆ ಡೆಕ್ರೋಲೆ-ಇವರೆಲ್ಲರ ತತ್ತ್ವಗಳನ್ನು ಅನುಸರಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 

	ಪ್ರಾಥಮಿಕ ಶಿಕ್ಷಣ 8 ವರ್ಷದ ಪ್ರಾಥಮಿಕ ಶಾಲೆಗೆ ಮಕ್ಕಳು 6ನೆಯ ವರ್ಷದಿಂದ ಸೇರಿ 14ನೆಯ ವರ್ಷದ ತನಕ ಕಡ್ಡಾಯವಾಗಿ ಶಿಕ್ಷಣ ಪಡೆಯುತ್ತಾರೆ. ಪ್ರೌಢಶಾಲೆಗೂ ಅಧ್ಯಾಪಕರ ಪ್ರಶಿಕ್ಷಣ ಶಾಲೆಗೂ ಸೇರಿದಂತಿರುವ ಪ್ರಾಥಮಿಕ ಶಾಲೆಗಳನ್ನು ಕೇಂದ್ರ ಸಚಿವಾಲಯ ನೋಡಿಕೊಳ್ಳುತ್ತದೆ. ಖಾಸಗಿ ಶಾಲೆಗಳಿಗೆ ಅನುದಾನ ನೀಡುತ್ತದೆ. 

	ಪ್ರಾಥಮಿಕ ಶಾಲೆಯ ಶಿಕ್ಷಣ ಎರಡೆರಡು ವರ್ಷದ ನಾಲ್ಕು ಅಂತಸ್ತುಗಳಲ್ಲಿ ಏರ್ಪಟ್ಟಿದೆ. ಮೂರನೆಯ ಅಂತಸ್ತನ್ನು ಮುಗಿಸಿದ ವಿದ್ಯಾರ್ಥಿಗಳು ಪ್ರೌಢ ಶಾಲೆಗೆ ಸೇರಲು ಹೋಗುತ್ತಾರೆ. ನಾಲ್ಕನೆಯ ಅಂತಸ್ತಿನ ಕೊನೆಯ ತರಗತಿ ಕಸಬು ಕಲೆಗಳ ಶಿಕ್ಷಣಕ್ಕೆ ಮೀಸಲು. 

	ಪಠ್ಯಕ್ರಮದಲ್ಲಿ ಅಂಥ ಯಾವ ವಿನೂತನೆಯೂ ಕಾಣುವುದಿಲ್ಲ. ಗ್ರಾಮಾಂತರ ಶಾಲೆಗಳಲ್ಲಿ ನಿಸರ್ಗ ವಿಜ್ಞಾನಕ್ಕೆ ಬದಲಾಗಿ ಕೃಷಿ ಮತ್ತು ತರಕಾರಿ ಫಲಪುಷ್ಪಗಳ ಬೆಳೆಯನ್ನು ಸೇರಿಸಲಾಗಿದೆ. ಬಾಲಕ ಬಾಲಕಿಯರ ಪಠ್ಯ ಕ್ರಮದಲ್ಲೂ ಅಂಥ ವ್ಯತ್ಯಾಸವಿಲ್ಲ. ಬಾಲಿಕೆಯರಿಗೆ ಹೊಲಿಗೆ, ಗೃಹ, ಅರ್ಥಶಾಸ್ತ್ರ, ಮನೆಗೆಲಸ ಇವನ್ನು ಸೇರಿಸಿರುವರು. ಕೇಂದ್ರದ ತನಿಖಾಧಿಕಾರಿಗಳು ಸರ್ಕಾರದ ಎಲ್ಲ ಪ್ರಾಥಮಿಕ ಶಾಲೆಗಳ ಪರೀಕ್ಷೆ ನಡೆಸುವರು. ಖಾಸಗಿ ಶಾಲೆಗಳನ್ನು ಪರೀಕ್ಷಿಸಿದರೂ ಕೇವಲ ಕಡ್ಡಾಯ ಹಾಜರಾತಿ ಮಾತ್ರ ಪರಾಮರ್ಶಿಸಲಾಗುತ್ತದೆ. 

	ಪ್ರೌಢಶಿಕ್ಷಣ: ಪ್ರೌಢಶಾಲೆಗಳು 12-18ರ ವಯೋಮಾನದ ಮಕ್ಕಳಿಗೆ ಶಿಕ್ಷಣ ಒದಗಿಸುತ್ತದೆ. ಅವು ಸಾಮಾನ್ಯ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ನೀಡುತ್ತವೆ. ಮತ್ತೆ ಕೆಲವು ಪ್ರೌಢ ಪ್ರಾಥಮಿಕ ಶಾಲೆಯ ಅಧ್ಯಾಪಕರ ಪ್ರಶಿಕ್ಷಣ ಕಾರ್ಯಕ್ರಮವನ್ನೂ ಹೊಂದಿರುತ್ತವೆ. ಪ್ರೌಢ ಶಿಕ್ಷಣ ಎರಡು ಅಂತಸ್ತಿನಲ್ಲಿ ಏರ್ಪಟ್ಟಿದೆ-ಅವನ್ನು ಕಿರಿಯ ಮತ್ತು ಹಿರಿಯ ಪ್ರೌಢಶಾಲೆಗಳೆಂದು ಕರೆಯಲಾಗಿದೆ. 

	ಕಿರಿಯ ಪ್ರೌಢಶಾಲೆಯಲ್ಲಿ ಪ್ರಾಚೀನ ಸಾಹಿತ್ಯ ಮತ್ತು ಆಧುನಿಕ ಮಾನವಿಕ ವಿಷಯಗಳನ್ನು ಬೋಧಿಸಲಾಗುತ್ತದೆ. 1860ರಿಂದ ಈಚೆಗೆ ಕೆಲವು ಶಾಲೆಗಳಲ್ಲಿ ತಾಂತ್ರಿಕ ಶಿಕ್ಷಣವನ್ನೂ ಸೇರಿಸಿದೆ. ಹಿರಿಯ ಪ್ರೌಢ ಶಾಲೆಯಲ್ಲಿ ಲ್ಯಾಟಿನ್, ಗ್ರೀಕ್, ಲ್ಯಾಟಿನ್ ಗಣಿತ ವಿಜ್ಞಾನ, ಲ್ಯಾಟಿನ್ ವಿಜ್ಞಾನ-ಈ ರೀತಿಯ ಮೂರು ಯೋಜನೆಯ ಪಠ್ಯಕ್ರಮವನ್ನೂ ಆಧುನಿಕ ಮಾನವಿಕಗಳಲ್ಲಿ ಗಣಿತ ಭೌತವಿಜ್ಞಾನ, ನಿಸರ್ಗಶಾಸ್ತ್ರ, ಅರ್ಥಶಾಸ್ತ್ರ-ಈ ವಿಷಯಗಳನ್ನು ಆಧಾರವಾಗಿಟ್ಟುಕೊಂಡ ಪಠ್ಯ ಕ್ರಮಗಳಿರುತ್ತವೆ. ಸರ್ಕಾರದ ಶಾಲೆಗಳ ಪಠ್ಯಕ್ರಮಕ್ಕೂ ಖಾಸಗಿ ಶಾಲೆಗಳ ಪಠ್ಯಕ್ರಮಕ್ಕೂ ವ್ಯತ್ಯಾಸವಿದೆ. ಹೀಗೆ ಪಠ್ಯ ಕ್ರಮದಲ್ಲಿ ಮಾರ್ಪಾಟು ಮಾಡಿಕೊಳ್ಳುವ ಸ್ವಾತಂತ್ರ್ಯ ಶಾಲೆಗಳಿಗಿದೆ. 

	ಬೋಧನಕ್ರಮ ಬಲುಮಟ್ಟಿಗೆ ಉಪನ್ಯಾಸಕ್ರಮವನ್ನು ಆಧರಿಸಿವೆ. ಈಚೆಗೆ ಪ್ರಚಾರಕ್ಕೆ ಬರುತ್ತಿರುವ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನಕ್ಕೆ ತಂದಿರುವ ನೂತನ ವಿಧಾನಗಳನ್ನು ಪ್ರೌಢಶಾಲೆಗಳಿಗೂ ವಿಸ್ತರಿಸುವ ಯತ್ನ ನಡೆಸುತ್ತಿದೆ. 

	ಅಧ್ಯಾಪಕರ ಪ್ರಶಿಕ್ಷಣ: ಅಧ್ಯಾಪಕರ ಶಿಕ್ಷಣ ಮೂರು ಮಟ್ಟಗಳಲ್ಲಿ ಏರ್ಪಟ್ಟಿವೆ. ಪ್ರಾಥಮಿಕ ಪೂರ್ವದ ಶಾಲೆಗಳ ಅಧ್ಯಾಪಕರ ಶಿಕ್ಷಣ ಪ್ರೌಢಶಾಲೆಗಳ ಅಂಗವಾಗಿ ನಡೆಯುತ್ತದೆ. ಈಚೆಗೆ ಅದನ್ನು ಬಾಲಿಕೆಯರ ಪ್ರಾಥಮಿಕ ಶಾಲೆಗಳಲ್ಲಿ ಏರ್ಪಡಿಸಲಾಗುತ್ತಿದೆ. ಕಿರಿಯ ಪ್ರೌಢಶಾಲೆ ಮುಗಿಸಿದ ವಿದ್ಯಾರ್ಥಿಗಳು ಅಲ್ಲಿಗೆ ಸೇರುತ್ತಾರೆ. ಇವು ಪ್ರೌಢ ಶಾಲಾ ನಿರ್ದೇಶಕರ ಮೇಲ್ವಿಚಾರಣೆಗೆ ಬರುತ್ತವೆ. ಕೆಲವು ಪ್ರೌಢಶಾಲೆಗಳಲ್ಲಿ ತಾಂತ್ರಿಕ ವಿಷಯಗಳ ಶಿಕ್ಷಕರ ತರಬೇತು ನೀಡಲಾಗುತ್ತಿದೆ. ಇವು ತಾಂತ್ರಿಕ ಶಿಕ್ಷಣದ ನಿರ್ದೇಶಕರ ಮೇಲ್ವಿಚಾರಣೆಗೆ ಬರುತ್ತವೆ. 

	1969ರ ತನಕ ಪ್ರಾಥಮಿಕ ಶಾಲಾ ಅಧ್ಯಾಪಕರ ಪ್ರಶಿಕ್ಷಣಕ್ಕೆ ಪ್ರತ್ಯೇಕ ಸಂಸ್ಥೆಗಳಿದ್ದುವು. ಈಚೆಗೆ ಅವನ್ನು ಹಿರಿಯ ಪ್ರೌಢಶಾಲಾ ಮಟ್ಟದ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಗಿದೆ. 

	ಹಿರಿಯ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರ ಪ್ರಶಿಕ್ಷಣ ಪಡೆದವರು ಅದೇ ಶಾಲೆಯಲ್ಲಿ ಮತ್ತೆರಡು ವರ್ಷದ ಸಾಮಾನ್ಯ ಹಾಗೂ ವೃತ್ತಿ ವಿಷಯಗಳ ಶಿಕ್ಷನ ಪಡೆದು ಹಿರಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಬಹುದು. ಅಲ್ಲಿ ಚರಿತ್ರೆ, ಮಾತೃಭಾಷೆ, ಆಧುನಿಕ ವ್ಯಾವಹಾರಿಕ ಭಾಷೆ, ಗಣಿತ, ವಿಜ್ಞಾನ, ಭೂಗೋಳಶಾಸ್ತ್ರ, ದೈಹಿಕ ಶಿಕ್ಷಣ, ನವ್ಯಕಲೆ ಮುಂತಾದ ಸಾಮಾನ್ಯ ವಿಷಯಗಳಲ್ಲಿ ಶಿಕ್ಷಣವೀಯಲಾಗುವುದು. ಹಿರಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗತಕ್ಕವರು 6 ವರ್ಷದ ಪ್ರೌಢಶಿಕ್ಷಣ ಮುಗಿಸಿಕೊಂಡು ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷಗಳ ವ್ಯಾಸಂಗ ನಡೆಸಬೇಕು. ಅದನ್ನು ಮುಗಿಸಿದವರಿಗೆ ಪದವಿಯ ಜೊತೆಗೆ ಬೋಧನೆಯ ಅರ್ಹತಾಪತ್ರವೂ ದೊರಕುತ್ತದೆ. ಸಾಮಾನ್ಯ ಪದವಿ ಪಡೆದವರು ಒಂದು ವರ್ಷದ ಪ್ರಶಿಕ್ಷಣದ ಅನಂತರ ಆ ಅರ್ಹತೆಗಳನ್ನು ಪಡೆಯಬಹುದು. 

	ತಾಂತ್ರಿಕ ಶಿಕ್ಷಣ: ಬೆಲ್ಜಿಯಮ್ ಶಿಕ್ಷಣ ಪದ್ಧತಿಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ತುಂಬ ಪ್ರಾಮುಖ್ಯವೀಯಲಾಗಿದೆ. ಇದು ಕೇಂದ್ರ ಸರ್ಕಾರದ ತಾಂತ್ರಿಕ ನಿರ್ದೇಶನಾಲಯದ ನೇತೃತ್ವದಲ್ಲಿ ನಡೆಯುತ್ತದೆ. ಸರ್ಕಾರ ಹಾಗೂ ಖಾಸಗಿ ಶಾಲೆಗಳೆರಡರಲ್ಲೂ ಇದು ವ್ಯವಸ್ಥೆಗೊಂಡಿದೆ. ಸರ್ಕಾರ ಇದರ ಪಠ್ಯ ಕ್ರಮ, ಸಿದ್ಧತೆಯ ಮಟ್ಟ ಬೋಧಿಸಬೇಕಾದ ವಿಷಯ, ವೇಳಾಪಟ್ಟಿ ಮುಂತಾದ ಅಂಶಗಳನ್ನೆಲ್ಲಾ ನಿಷ್ಕರ್ಷಿಸುತ್ತದೆ. ಅನುದಾನ ದೊರೆತ ಖಾಸಗಿ ಶಾಲೆಗಳು ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಆದರೆ ಸ್ಥಳೀಯ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಖಾಸಗಿ ಶಾಲೆಗಳಿಗೆ ಶೇಕಡ 20 ರಷ್ಟು ಸ್ವಾತಂತ್ರ್ಯ ನೀಡಲಾಗಿದೆ.

	ಈ ಶಿಕ್ಷಣದಲ್ಲಿ ಕೈಗಾರಿಕಾ ಶಾಲೆ ಮತ್ತು ಔದ್ಯೋಗಿಕ ಶಾಲೆ ಎಂಬ ಎರಡು ಅಂತಸ್ತಿನ ಶಾಲೆಗಳಿವೆ. ಕೈಗಾರಿಕಾ ಶಾಲೆಯಲ್ಲಿ ಕೇವಲ ಕಸಬು ಕಲೆಗಳ ಬಗೆಗೆ ತರಬೇತು ಮಾತ್ರ ನೀಡಲಾಗುವುದು. ಔದ್ಯೋಗಿಕ ಶಾಲೆಗಳಲ್ಲಿ ವಿವಿಧ ತಾಂತ್ರಿಕ ಉದ್ಯೋಗಗಳ ತರಬೇತಿನ ಜೊತೆಗೆ ಸಾಂಸ್ಕøತಿಕ ಹಾಗೂ ಅದಕ್ಕೆ ಸಂಬಂಧಿಸಿದ ಸೈದ್ಧಾಂತಿಕ ವಿಷಯಗಳನ್ನು ಬೋಧಿಸಲಾಗುವುದು. 

	ಈ ತಾಂತ್ರಿಕ ಶಾಲೆಗಳಲ್ಲದೆ ಪ್ರತ್ಯೇಕ ತಾಂತ್ರಿಕ ಪ್ರೌಢಶಾಲೆಗಳೂ ಇವೆ. ಇಲ್ಲಿಗೆ ಇತರ ಪ್ರೌಢ ಶಾಲೆಗಳಂತೆ ಪ್ರಾಥಮಿಕ 6 ನೆಯ ತರಗತಿ ಮುಗಿಸಿದವರನ್ನು ಅಥವಾ 15 ವರ್ಷ ವಯಸ್ಸಾಗಿದ್ದರೆ ಅಂಥವರನ್ನು ಸೇರಿಸಿಕೊಳ್ಳಲಾಗುವುದು.

	ಈ ತಾಂತ್ರಿಕ ಶಿಕ್ಷಣ ಸೌಲಭ್ಯ ವಿಶಿಷ್ಟ ತಾಂತ್ರಿಕ ಶಾಲೆಗಳಲ್ಲೂ ಏರ್ಪಟ್ಟಿದೆ. ಇವು ಮೂರು ಮಟ್ಟಗಳಲ್ಲಿವೆ. ಮೊದಲನೆಯದು ಎರಡು ವರ್ಷ ಕಾರ್ಯಕ್ರಮದ್ದು. ಅಲ್ಲಿ ವ್ಯವಸಾಯ, ವಾಣಿಜ್ಯ, ಉದ್ಯೋಗ, ಉಪಚಾರಿಕೆ ಮುಂತಾದ ವಿಷಯಗಳಲ್ಲಿ ಡಿಪ್ಲೊಮ ಶಿಕ್ಷಣ ನೀಡಲಾಗುತ್ತದೆ. ಎರಡನೆಯ ವಿಧದವು 3 ವರ್ಷದ ಕಾರ್ಯಕ್ರಮ ಹೊಂದಿದ್ದು ಎಂಜನಿಯರಿಂಗ್ ವೃತ್ತಿಯ ಡಿಪ್ಲೊಮ ತರಗತಿಗಳನ್ನು ನಡೆಸುತ್ತವೆ. 3ನೆಯ ವಿಧದವು ಎಂಜನಿಯರಿಂಗ್ ವಾಸ್ತುಶಿಲ್ಪ ಮುಂತಾದ ವಿಷಯಗಳಲ್ಲಿ 5 ವರ್ಷದ ಶಿಕ್ಷಣವಿತ್ತು ವಿಶ್ವವಿದ್ಯಾಲಯದ ಉನ್ನತ ವೃತ್ತಿ ಪದವಿಗೆ ಸಮನಾದ ಡಿಪ್ಲೊಮ ನೀಡುತ್ತವೆ. 

	ಕಲಾಶಿಕ್ಷಣ: ಕಲಾಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳಿವೆ. ಇವು ಸೆಕೆಂಡರಿ ಮಟ್ಟದವು. ಇಲ್ಲಿ ಮುಖ್ಯವಾಗಿ ಸಂಗೀತ ಮತ್ತು ವರ್ಣಚಿತ್ರಗಳಲ್ಲಿ ಶಿಕ್ಷಣವೀಯಲಾಗುವುದು. ಶಾಸ್ತ್ರೀಯ ಹಾಗೂ ಚರ್ಚಿನ ಪ್ರಾರ್ಥನಾ ಸಂಗೀತ ಬೋಧನೆಗೂ ಪ್ರತ್ಯೇಕ ಶಾಲೆಗಳಿವೆ. 

	ಉನ್ನತ ಶಿಕ್ಷಣ: ಸರ್ಕಾರದ ಗಂಟ್ ಮತ್ತು ಲೀಜ್ ವಿಶ್ವವಿದ್ಯಾಲಯಗಳಲ್ಲೂ ವಿಶ್ವವಿದ್ಯಾಲಯ ಕೇಂದ್ರಗಳಲ್ಲೂ ಆಂಟ್‍ವರ್ಪ್ ಮತ್ತು ಮೊನ್ಸ್ ವಿಶ್ವವಿದ್ಯಾಲಯಗಳಲ್ಲೂ ಬ್ರೂಸೆಲ್ಸ್ ಮತ್ತು ಲೂವೈಯಿನ್ ಸ್ವತಂತ್ರ ವಿಶ್ವವಿದ್ಯಾಲಯದಲ್ಲೂ ಮತ್ತೆ ಕೆಲವು ಪ್ರತ್ಯೇಕ ವಿಭಾಗಗಳಲ್ಲೂ ಉನ್ನತ ಶಿಕ್ಷಣದ ವ್ಯವಸ್ಥೆಯಿದೆ. 

	ಆರು ವರ್ಷದ ಪ್ರೌಢಶಿಕ್ಷಣವನ್ನು ಮುಗಿಸಿ ಬೌದ್ಧಿಕ ಪರೀಕ್ಷೆಯೊಂದರಲ್ಲಿ ಉತ್ತೀರ್ಣರಾದವರನ್ನು ಉನ್ನತ ಶಿಕ್ಷಣಕ್ಕೆ ಸೇರಿಸಿಕೊಳ್ಳಬಹುದೆಂದು ರಾಜ್ಯ ಶಾಸನವಿದೆ. ಎಂಜನಿಯರಿಂಗ್ ಉನ್ನತ ಪದವಿ ಶಿಕ್ಷಣಕ್ಕೆ ಸೇರತಕ್ಕವರು ಪ್ರವೇಶ ಪರೀಕ್ಷೆಯೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ಪದವಿ ಮಟ್ಟದಲ್ಲಿ ವಿಶ್ವವಿದ್ಯಾಲಯಗಳು ಸಾಮಾನ್ಯ ಹಾಗೂ ವೃತ್ತಿ ಶಿಕ್ಷಣಗಳೆರಡರಲ್ಲೂ ಶಿಕ್ಷಣವೀಯುವ ಘಟಕಗಳನ್ನು ಹೊಂದಿರುತ್ತವೆ.

	ಖಾಸಗಿ ಶಿಕ್ಷಣ ಪಡೆದು ವಿಶ್ವವಿದ್ಯಾಲಯಗಳು ನಡೆಸುವ ಪರೀಕ್ಷೆಗೆ ಕುಳಿತು ಪದವಿಗಳನ್ನು ಪಡೆಯುವ ಅವಕಾಶವೂ ಉಂಟು. ಇದನ್ನು ಇಂಗ್ಲೆಂಡಿನ ಮುಕ್ತ ವಿಶ್ವವಿದ್ಯಾಲಯದ ಸೌಲಭ್ಯಕ್ಕೆ ಹೋಲಿಸಬಹುದು. 				
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ